- ಪುಸ್ತಕದ ಹೆಸರು: ಉದಯಾದಿತ್ಯಾಲಂಕಾರ
- ಲೇಖಕನ ಹೆಸರು: ಉದಯಾದಿತ್ಯ (ಚೋಳವಂಶದ ಒಬ್ಬ ದೊರೆ)
- ಕಾಲ: ಹನ್ನೆರಡನೆಯ ಶತಮಾನ (ಸುಮಾರು ಕ್ರಿ.ಶ. 1150)
- ವಸ್ತು: ಕಾವ್ಯಮೀಮಾಂಸೆ (ಅಲಂಕಾರಶಾಸ್ತ್ರ)
-
ಪರಿಚಯ:
‘ಉದಯಾದಿತ್ಯಾಲಂಕಾರ’ವು ಅಲಂಕಾರಶಾಸ್ತ್ರವನ್ನು
ಕುರಿತ ಚಿಕ್ಕ ಪುಸ್ತಕ. ಇದನ್ನು ಬರೆದಿರುವ ಉದಯಾದಿತ್ಯನು ತಾನು ಸೋಮನಾಥನೆಂಬ ಚೋಳ ರಾಜನ ಮಗನೆಂದು
ಹೇಳಿಕೊಂಡಿದ್ದಾನೆ. ಇವನ ಅನಂತರ ಬಂದ ಆಲಂಕಾರಿಕರು ಈ ಕೃತಿಯನ್ನು ಹೆಸರಿಸಿದ್ದಾರೆ. ಇದು ದಂಡಿಯ ಪ್ರಸಿದ್ಧ
ಸಂಸ್ಕೃತ ಕೃತಿಯಾದ ‘ಕಾವ್ಯಾದರ್ಶ’ವನ್ನು ಅವಲಂಬಿಸಿದೆ.
ಇಲ್ಲಿರುವ ಅನೇಕ ಪದ್ಯಗಳು ಸಂಸ್ಕೃತದ ಯಥಾವತ್ ಅನುವಾದಗಳಾಗಿವೆ. ಇದರಲ್ಲಿ 72 ಕಂದಪದ್ಯಗಳು ಮತ್ತು
ವೃತ್ತಗಳಿವೆ. ಇದರಲ್ಲಿ ಕಾವ್ಯಭೇದ, ರೀತಿ, ರಸ, ಅಲಂಕಾರ ಮತ್ತು ಕಾವ್ಯಗುಣ ಎಂಬ ಪರಿಕಲ್ಪನೆಗಳನ್ನು
ವಿವರಿಸಲಾಗಿದೆ. ಪ್ರತಿಯೊಂದು ಪದ್ಯದಲ್ಲಿಯೂ ಒಂದು ಪರಿಕಲ್ಪನೆಯನ್ನು ವಿವರಿಸಿ, ಅದಕ್ಕೆ ಸೂಕ್ತವಾದ
ನಿದರ್ಶನವನ್ನು ಕೊಡಲಾಗಿದೆ. ಉದಾಹರಣೆಗೆ ‘ಉತ್ಪ್ರೇಕ್ಷಾಲಂಕಾರ’ ಎಂದರೆ ಯಾವುದೋ ಒಂದು ವಸ್ತು ಅಥವಾ ಸಂಗತಿಗೆ ನಿಜವಲ್ಲದ ಲಕ್ಷಣವೊಂದನ್ನು
ನಿಜವೆಂದು ಹೇಳುವುದು. ಮಲ್ಲಿಗೆ ಹೂವು ತನ್ನಷ್ಟಕ್ಕೆ ತಾನು ಅರಳುತ್ತದೆ. ಅದು ತನ್ನ ಪ್ರಿಯೆಯಿಂದ
ಅಗಲಿರುವ ಪ್ರಿಯನನ್ನು ಗೇಲಿಮಾಡಿ ನಗುತ್ತಿದೆಯೆಂದು ಹೇಳುವುದು ಉತ್ಪ್ರೇಕ್ಷೆ.
‘ಕವಿರಾಜಮಾರ್ಗ’ದ ಕರ್ತೃವಾದ ಶ್ರೀವಿಜಯನು
ಹೆಸರಿಸಿರುವ ವಿಶಿಷ್ಟ ಪ್ರಕಾರಗಳಾದ ಚತ್ತಾಣ ಮತ್ತು ಬೆದಂಡೆಗಳನ್ನು ಉದಯಾದಿತ್ಯನೂ ಪ್ರಸ್ತಾಪಿಸಿದ್ದಾನೆ.
ಸಂಸ್ಕೃತದ ಮಾದರಿಗಳನ್ನು ಅನುಸರಿಸಿ ಕನ್ನಡದಲ್ಲಿ ಬರೆಯಲಾಗಿರುವ ಅನೇಕ ಪುಸ್ತಕಗಳ ಪರಂಪರೆಯಲ್ಲಿ
‘ಉದಯಾದಿತ್ಯಾಲಂಕಾರ’ವೂ ಒಂದು. ಇದು ಕನ್ನಡ
ಚಿಂತನೆಯ ಪರಂಪರೆಗೆ ಹೆಚ್ಚನದೇನನ್ನೂ ಸೇರಿಸುವುದಿಲ್ಲ.
- ಪ್ರಕಟಣೆಯ ಇತಿಹಾಸ:
ಅ. 1887, ಸಂ. ಪದ್ಮರಾಜಪಂಡಿತ, ಸತ್ಸಂಪ್ರದಾಯ ಕಲಾನಿಧಿ ಮುದ್ರಾಕ್ಷರಶಾಲೆ.
ಆ. 1894, ಎಂ.ಎ. ರಾಮಾನುಜಯ್ಯಂಗಾರ್ ಮತ್ತು ಎಸ್.ಜಿ. ನರಸಿಂಹಾಚಾರ್,
ಕರ್ನಾಟಕ ಕಾವ್ಯಮಂಜರಿ, ಮೈಸೂರು.
ಇ. 1970, ಎಂ.ವಿ. ಸೀತಾರಾಮಯ್ಯ, ಡಿ.ವಿ.ಕೆ.ಮೂರ್ತಿ ಪ್ರಕಾಶನ,
ಮೈಸೂರು.
ಈ. 1974, ಬಿ.ಎಸ್. ಸಣ್ಣಯ್ಯ, ಪ್ರಬುದ್ಧ ಕರ್ನಾಟಕ, ಸಂಪುಟ
56, ಸಂಚಿಕೆ 2
ಉ. 1996, ಸಿ. ಮಹಾದೇವಪ್ಪ, ಸಂಶೋಧನ ಕೋಠಿ, ಬೆಂಗಳೂರು.
- ಪರಾಮರ್ಶೆ ಮತ್ತು ಮುಂದಿನ ಓದು:
ಅ. ತೀ.ನಂ.ಶ್ರೀಕಂಠಯ್ಯ, ಭಾರತೀಯ ಕಾವ್ಯಮೀಮಾಂಸೆ, 1956
ಆ. ಎಂ.ವಿ. ಸೀತಾರಾಮಯ್ಯ, ಶಾಸ್ತ್ರ ಸಾಹಿತ್ಯ, 1975, ಬೆಂಗಳೂರು
ವಿಶ್ವವಿದ್ಯಾಲಯ, ಬೆಂಗಳೂರು
ಆ. ಕನ್ನಡ ಸಾಹಿತ್ಯಮೀಮಾಂಸೆ, ಎಸ್.ಎಂ. ಹಿರೇಮಠ, ಗುಲ್ಬರ್ಗ
8. ಹಸ್ತಪ್ರತಿಗಳು
ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನಸಂಸ್ಥೆಯಲ್ಲಿರುವ ಅನೇಕ ಹಸ್ತಪ್ರತಿಗಳು, ಕರ್ನಾಟಕ
ವಿಶ್ವವಿದ್ಯಾಲಯದಲ್ಲಿರುವ ಒಂದು ಹಸ್ತಪ್ರತಿ ಮತ್ತು ಮೂಡಬಿದ್ರಿಯ
‘ದಿಗಂಬರ ಜೈನಶಾಲೆ‘ಯಲ್ಲಿರುವ ಒಂದು ಹಸ್ತಪ್ರತಿಯನ್ನು ಹೆಸರಿಸಬಹುದು